Pages

Tuesday, March 6, 2012

ಇದು ಕಥೆಯಲ್ಲ..



ಆತ ಪಯಣಿಗ.. ಹಲವಾರು ವರ್ಷಗಳಿಂದ ಅಖಂಡವಾಗಿ ನಡೀತಾನೆ ಇದಾನೆ .. ಸುಸ್ತಾಗಿ ನಿಂತಿದ್ದು ಇಲ್ಲವೇನೋ.. ದಾರಿಯಲ್ಲಿನ ಕಲ್ಲ್ಲು ಮುಳ್ಳುಗಳನ್ನು ಲೆಕ್ಕಿಸದ ಅನವರತ, ಅವಿಶ್ರಾಂತ ಪಯಣ - ಅನ್ನುವುದಕ್ಕಿಂತಲೂ ಹೆಚ್ಚಿನದಾಗಿ, ಅದೊಂದು ಬಾಹ್ಯ ಪ್ರಪಂಚದ ಅರಿವೇ ಇಲ್ಲ್ಲದ ಹುಚ್ಚು ಪಯಣ..  ಯಾಕಪ್ಪಾ ಈ ಪರಿಯ ಪಯಣ?.. ಅಂತ ಕೇಳಿದ್ರೆ ಬಹುಶಃ ಅವನಲ್ಲಿ ಉತ್ತರವಿಲ್ಲ.. 

ಹೌದು...ಅವನ  ರೀತಿಯೇ ಹಾಗೆ!!.. 

ಈ ಪ್ರಪಂಚ ದೊಡ್ಡದಾಯಿತೆಂದು ತನ್ನದೇ ಲೋಕವನ್ನ  ಸೃಷ್ಟಿಸಿಕೊಂಡು ಬಿಟ್ಟಿದ್ದಾನೆ.. ಅಲ್ಲಿರುವುದು ಕೇವಲ ಕನಸುಗಳು.. ಮತ್ತು ಕನಸುಗಳು.. 
ಇಷ್ಟನ್ನ ಬಿಟ್ಟು ಮತ್ತೇನಾದರೂ ಸಿಗಬಹುದು ಅಂತ ತಡಕಾಡಿದರೆ..
ಮೆಲುಕಿದಷ್ಟೂ ಬಾಹ್ಯದ ಕಲ್ಲು ಮುಳ್ಳುಗಳಿಗಿಂತಲೂ  ಹೆಚ್ಚ್ಚಾಗಿ ಚುಚ್ಚುವ ಹಳೆಯ ಪುಟ್ಟ ಪುಟ್ಟ ತಪ್ಪುಗಳು .. 
ಪಟ್ಟ ಪಶ್ಚಾತಾಪ... ಪುಳಕಿತಗೊಳಿಸುವ ಆರ್ದ್ರ ನೆನಪುಗಳು .. ಇದರೊಟ್ಟಿಗೆ ಕಾಡುವ ಗಾಢ ಮೌನ..

ಹಾಗಂತ ಆತ   ಬಾಹ್ಯದೊಂದಿಗೆ ಸಂವೇದನೆಯನ್ನೇ ಕಳೆದುಕೊಂಡಿದಾನೆ ಅಂದ್ರೆ.. ಅದು ಖಂಡಿತವಾಗಿಯೂ ತಪ್ಪು... 

ಆತ 'ಆಮೆ'ಯಂತಹವ .. ತನ್ನ ದುಃಖ ಸಂತೋಷಗಳೆಲ್ಲ  ಚಿಪ್ಪಿನಂತಹ ಅವನ ಲೋಕದೊಳಗೆ ಮುಡಿಪು..  
ಅಲ್ಲಿಯೂ ಇಲ್ಲಿಯ ಹಾಗೇ 'ತಂತಿ' ವೀಣೆಯ ಝೇಂಕಾರವಾಗ್ತದೆ ..
ಆದರೆ ಉಲಿಯುವ ಕೋಗಿಲೆ ಸದೃಶ ಧ್ವನಿ ಕರ್ಣ ಕಠೋರವಾಗುವ  ಭಯವಿಲ್ಲ..
ಹೊರಗಿನ ನೋವು, ದುಃಖ ದುಮ್ಮಾನಗಳಿಗೆ ಪರ್ಯಾಯವಾದ ಆನಂದವನ್ನು.. 
ಅವನ ಲೋಕದಲ್ಲಿ ಕಂಡುಕೊಳ್ಳೋ  ಪ್ರಯತ್ನವಷ್ಟೇ..       

ನಮ್ಮೊಳಗೂ ಇಂತಹವನೊಬ್ಬನಿದಾನಾ ??..
ಇದ್ರೆ ಹೊರಗೆ ಕರ್ಕೊಂಡು ಬರೋಣ.. 

 


-- \/эйждт

Thursday, February 9, 2012

ನೀ – ನಾ  ಬರೆವ  ಕವನ!!

ಹೊತ್ತಲ್ಲದಾ  ಹೊತ್ತಲ್ಲಿ ….
ಪೆನ್ನ  ಶಾಯಿಯೇ  ಒಣಗಿದಂತೆ ..
ಮನದಿ  ಮೂಡಿದ್ದ  ಮಬ್ಬುಗತ್ತಲು ..
ಬರೆವ  ಹಾಳೆ  ಮುದ್ದೆಯಾಗಿ ..
ಕಸವಾಗುವ  ಸಮಯದಿ ….
..ಬಂದಿದ್ದಳವಳು ..
'ನಾ' – ನೀ  ಬರೆವ  'ಕವನ'ವಾಗುವೆನೆನ್ನುತ ..

ಹಲ್ಲು  ಗಿಂಜಿ .. ಮೊಂಬತ್ತಿಯ  ಹಚ್ಚಿ ..
ಬರೆಯಲು  ಕೂತೆ .. ಕರೆಂಟು  ಇರಲಿಲ್ಲವಲ್ಲ ..
ಥುತ್ .. ಅದೆಂತಹ  ಗಾಳಿ!!.. 
ಮೋಡವನ್ನೇನೋ    ಸರಿಸಿತು ..
ಆದರೆ .. ಬೆಳಕೆಲ್ಲಿಂದ  ಬಂದೀತು??..
ಸೂರ್ಯ  ಮುಳುಗಿದಾ   ಹೊತ್ತಲ್ಲಿ ..

ಚಂದಿರನಾದರೂ  ಬೆಳಕನಿತ್ತಾನು ..
ಎಂದೆಣಿಸಿದರೆ ..  ಅಂದೇ  ಅಮಾವಾಸ್ಯೆ ..
ಥೋ .. ಕಣ್ಮುಚ್ಚಿ  ಮಲಗಿದರೆ …
ಅವಳ  ನಗುವಿನಂದದಾ  ಬೆಳಕು ..
ಸಾಕಲ್ಲ .. ಕನಸಲ್ಲೇ  ಬರೆದೆ  ಕವನವ …
ಬೆಳಗ್ಗೆ  ಎದ್ದು  ಕಂಡ  ಕನಸಿಗೊಂದಿಷ್ಟು ..
ಅರ್ಥ  ಪೂರೈಸಬೇಕೆನ್ನುತ .. 


                                                            -- \/эйждт

Saturday, February 4, 2012

ಅದೆಲ್ಲೋ … ಯಾರೋ  ಹೇಳಿದಂತೆ ..

ಕೇಳುತ್ತ  ನಾ .. ಮನದಲ್ಲೇ  ನಕ್ಕಂತಹ  ನೆನಪು ..

ಮುಸುಕು … ಮುಸುಕು ..

ಬಹುಶಃ  ವ್ಯಂಗ್ಯವೇ  ಇತ್ತಿರಬೇಕು ..

ಮುಖದಿ  ಮೂಡಿದ್ದ  ಆ  ನನ್ನ  ನಗುವಲ್ಲಿ ..

High wayಲಿ  ಸಾಗುವಾಗ  ಅಚಾನಕ್ಕಾಗಿ ..

ಒಕ್ಕರಿಸುವ  ಹೊಂಡದಂತೆಯಾ     ??..

ಅಥವಾ ..

ಆನೆಯ  ಹಿಡಿಯಲು  ತೋಡಿಟ್ಟ  ಖೆದ್ದದಂತೆಯಾ …??..

ನಾನು  ವಟಗುಟ್ಟಿದ್ದೆ   …

ಆದರೆ ….

ಇದೆಲ್ಲವೂ  ಹಿಂದಿನ  ಮಾತು ….

ಯಾಕೆಂದರೆ …

ನಾನು  ಮಾಡದೇ … ನನಗೂ ..  ಅದಾಗಿಯೇ  ಆಗಿಬಿಟ್ಟಿತಲ್ಲ ..

ನಿಂತ  ನಿಲುವಲ್ಲಿ .. ಸೆಳೆವ  ಕಂಗಳಲಿ ..

ಅಕ್ಕ -ಪಕ್ಕವ  ಮರೆಸಿ  ನಿಲ್ಲಿಸುವ ..

.. ಆ  ಫಸ್ಟು  ಲವ್ವು ..!!

 

 

Friday, January 13, 2012

                            'ತಲೆ' - 'ಬುಡ'ವಿಲ್ಲದ್ದು..


ಇವತ್ತೂ ಅಷ್ಟೆ.. ನನಗೆ  ತಲೆ ನೋವಿದೆ... ಅಂದ್ರೆ ಮೈಗ್ರೇನ್ ನಂತಹದೇನಲ್ಲ..
ಯಾವಾಗಲಾದರೊಮ್ಮೆ.. ಹೀಗೇ ಪುಸ್ತಕ ಹಿಡಿದು ಕೂತಾಗ...ಬೇಡ ಅಂದ್ರೂ ಬಂದು ಬಿಡತ್ತೆ....
ನನಗೂ ಅದೇ ಬೇಕಾಗಿರೋದು.. ನಾನೂ ತಡ ಮಾಡೋಲ್ಲ.. ಅಂಗಾತವಾಗಿ ಮಲಗಿ ಬಿಡ್ತೇನೆ..
ಮತ್ತೊಂದು ಐದು ನಿಮಿಷದಲ್ಲಿ ತಲೆ ನೋವು ಎಲ್ಲಿಗೆ ಓಡಿ ಹೋಗತ್ತೋ..
ಖಂಡಿತವಾಗಿಯೂ ನನಗೆ ಗೊತ್ತಿಲ್ಲ..
ಆವಾಗ ಶುರುವಾಗತ್ತೆ ನೋಡಿ.. ನನ್ನ ಆ ಕೊನೆ ಮೊದಲಿಲ್ಲದ 'ಹುಚ್ಚು'  ಪಯಣ..
"ನಾನೇನಾದ್ರೂ ಮಾಡಬೇಕಲ್ಲ".. ಅನ್ನೋದ್ರಿಂದ ಶುರುವಾಗತ್ತೆ... ಏನು ಮಾಡಬಹುದು ಅನ್ನೋ ಪ್ರಶ್ನೆ
 ಆವಾಗ ಆವಿರ್ಭವಿಸುತ್ತೆ.. ಅದಕ್ಕೆ ಎದುರುಗಡೆ ಇರೋ ಗೋಡೆ, ತಲೆ ಮೇಲಿರೋ ಛಾವಣಿಯಲ್ಲಿ..
 ಉತ್ತರ ಹುಡುಕೋಕೆ ಶುರು ಮಾಡ್ತೇನೆ.. ಅವೂ ಅಷ್ಟೆ  ಉತ್ತರವಾಗೋಕೆ ಹಂಬಲಿಸಿ ಕಾದಿರ್ತಾವೆ...
ಎಷ್ಟಂದ್ರೂ ನಮ್ಮ ನೆಂಟಸ್ತನ ನಿನ್ನೆ ಮೊನ್ನೆಯದಲ್ಲವಲ್ಲ!!..
ಆದ್ರೆ ಅವಕ್ಕೂ ಒಂದು ಮಿತಿ ಇದೆ.. googleತರಹ.. ಕೆಲವೊಮ್ಮೆ ಎಷ್ಟೇ refined search
ಕೊಟ್ರೂ ಅವೇ result ಗಳು ಬಂದು ಒಕ್ಕರಿಸ್ತಾವಲ್ಲ.. ಅದೇ ರೀತಿ... ನನಗೂ ಮತ್ತೆ ಮತ್ತೆ ಅದೇ ಉತ್ತರಗಳನ್ನ ನೋಡ್ತಾ ನೋಡ್ತಾ  ಅದ್ಯಾವಾಗಲೋ ನಿದ್ರೆ ಬಂದ್ಬಿಟ್ಟಿರತ್ತೆ ....
ಅಲ್ಲಿಗೆ ಏನೋ ಕಡಿದು ಹಾಕಲು ಹೊರಟವ.. 'ಸದ್ದಿಲ್ಲದೆ' ಅವತ್ತಿನ ಮಟ್ಟಿಗೆ  ಸತ್ತು ಮಲಗಿರ್ತಾನೆ..
ನಾಳೆ ಮತ್ತೆ ಇದ್ದೇ ಇದೆಯಲ್ಲ.. ಹಾಡಿದ್ದೆ ಹಾಡೋ 'ಕಿಸ್ಬಾಯಿ ದಾಸ'ನ ತರಹ ಅದೇ ರಾಗ ಅದೇ ಹಾಡು....   

                                  http://images.colourbox.com/thumb_COLOURBOX1081133.jpg
  
                                                                                                 -- \/эйждт

Tuesday, December 13, 2011

ಈ ಬರವಣಿಗೆ ಅನ್ನೋದು ಪ್ರೇಯಸಿ ಇದ್ದ ಹಾಗೆ...(ನಾನು ಇನ್ನೂ ತೀರ ಎಳಸು ಪ್ರೇಮಿ.. ಇರಲಿ...)
ಇನ್ನೇನು ಅವಳನ್ನ ಬರಸೆಳೆದಪ್ಪಿಕೊಂಡೆ ಅನ್ನುವಷ್ಟರಲ್ಲಿ ಶುರುವಾಗೋ ಆ ಹುಸಿಮುನಿಸು...
...ಎಷ್ಟು ಓಲೈಸಿದರೂ ಒಲಿಯದ ಆ ಬಿಂಕ...  ಕೊಡೋ  buildup ......
ಹುಹ್.. ಇನ್ನು ಇವಳೊಂದಿಗೆ ಏಗೋಕೆ ಸಾಧ್ಯವಿಲ್ಲ....ಹೊರಟು ಹೋಗ್ಬಿಡೋಣ.... 
.....ಅಂತ ಮನದ ಮೂಲೆಯಲ್ಲೋ ಅನ್ನಿಸೋಕೆ ಪ್ರಾರಂಭವಾದಾಗ... 
............ಮತ್ತೆ ಮಿನುಗೋಕೆ ಶುರುವಾಗೋ ಆ ಕಣ್ಣುಗಳು......
ಭೇಟಿ ಮುಗಿಸಿ ವಾಪಸ್ ಬರೋವಾಗ ಆಡದೇ ಉಳಿದುಹೋದ.. ಮಾತುಗಳ ಹಾಗೆ..
....ಲೇಖನಿಯ  ಶಾಯಿಗೊಂದು ರೂಪ ಕೊಡಲಾಗದ ಅದೆಷ್ಟೋ ವಿಚಾರಗಳು.. ಭಾವನೆಗಳು..
           
                    ಯಾರಿಗೆ ಹೇಳೋಣ ನಮ್ಮ  ಪ್ರಾಬ್ಲಮ್ಮು !!.... 


                                                             
                                                                                                                                                   --\/эйждт



Tuesday, November 15, 2011


                                       ಮೆಲುಕು 


ಮೊನ್ನೆ ಯಾಕೋ ನನ್ನೊಳಗೆ ತುಕ್ಕು ಹಿಡಿದು ಕೂತಿದ್ದ "ಬಾರಿಸು ಕನ್ನಡ ಡಿಂಡಿಮವ" ಎಂಬ 'ಗಂಟೆ'ಯ   ನೆನಪಾಯ್ತು...   ತುಂಬಾ ದಿನ ಆಗಿತ್ತಲ್ಲ.. ಆ ಗಂಟೆಯ ಸವರುತ್ತ... ಶುಚಿಗೊಳಿಸೋಣವೆಂದು 'ಮನೆ'ಯಂಗಳದಿ ಕೂತೆ... 
             ...ಒಂದೊಂದು ತುಕ್ಕನ್ನೂ ತೆಗೆಯುತ್ತ  ಹೋದ ಹಾಗೆ ಹಿಂದೆ ಅಡಗಿ ಕೂತಿದ್ದ "ನಮ್ಮೂರ ಶಾಲೆಯೆಂಬ-ಕನ್ನಡತಿ"ಯ ಕಂದ 'ರಾಘವ' ಸಿಂಬಳ ಸುರಿಸುತ್ತ... ಜರಿಯುತ್ತಿರುವ ಚಡ್ಡಿಯ ಮೇಲೇರಿಸುತ್ತ ಕೈಯಲ್ಲೊಂದು 'ಗಿರಿಗಿಟ್ಟಿ'ಯ ಹಿಡಿದು ಹೆಗಲಿಗೆ 'ಪಾಟಿ-ಕಡ್ಡಿಯ' ಚೀಲವ ಏರಿಸಿ ದೂರದ ಶಾಲೆಗೆ ಹೊರಟಿದ್ದ....
              .....ಎದುರು ಮನೆಯ ಗೇಟಿನ ಕಿರುಗುಡುವ ಸದ್ದು ನನ್ನನ್ನು ವಾಸ್ತವಕ್ಕೆ ಬೇಡವೆಂದರೂ ಕರೆತಂದಿತ್ತು... 
              ಆ  ಗೇಟಿನಿಂದ ಗಜಗಾತ್ರದ ಬ್ಯಾಗಿಗೆ ನೇತು ಹಾಕಿದಂತೆ ಕಾಣುತ್ತಿದ್ದ ಪೋರ-'ಕಿಶೋರ' 
ಆಟೋ-ಅಂಕಲ್ ನ ಬರವ ನಿರೀಕ್ಷಿಸುತ್ತ ಇಸ್ತ್ರಿಮಾಡಿದ ಅಂಗಿ-ಚಡ್ಡಿ, ಫಳ ಫಳನೆ ಹೊಳೆಯುವ ಬೂಟು ತೊಟ್ಟು ವಯಸ್ಸಿಗೆ ಮೀರಿದ ಗಾಂಭೀರ್ಯದೊಂದಿಗೆ ನಿಂತಿದ್ದ.....   
              ಯಾಕೋ ನನ್ನ 'ಡಿಂಡಿಮವ' ಮುಂದುವರೆಸಲಾಗೆಲೇ ಇಲ್ಲ.... ಮತ್ತು...
 ಎದುರು ನಿಂತಿದ್ದ ಕಿಶೋರನಲ್ಲಿ ಕಾಣಬೇಕಾಗಿದ್ದ ನನ್ನ ರಾಘವನನ್ನು ಕಾಣಲಾರದೇ ಹೋದೆ...
 

                                                                                                         
  

                                                                                                                                               --\/эйждт

Tuesday, November 1, 2011

 

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...

                               

                                ಸುಮ್ನೆ …

ಅಂದು …

              ಮಟ  ಮಟ  ಮಧ್ಯಾಹ್ನದಿ    ಕಂಡೆ  ಅವನ  ಮುಖ …

               ..ಕುರುಚಲು  ಗಡ್ಡ,  ಜಿನುಗುವ  ಬೆವರು  ಹನಿ …

              ಕಣ್ಣು  ಅವಳ  ಬರುವಿಕೆಯ  ನಿರಿಕ್ಷೆಯಲ್ಲಿತ್ತು ….

              ಕೇಳಿದೆ …"ಅವಳಾ " …?  ವ್ಯಂಗ್ಯವಿತ್ತು  ನನ್ನ  ಮಾತಲಿ …

              ಅವ  ಹೇಳಿದ … "ಕಾದಿದ್ದಳಂತೆ  ಶಬರಿ  …

              ರಾಮ  ಬರುತಾನೆಂದು .. ರಾಮಾಯಣದಿ …

              ಕೊನೆಗೂ   ನಿಜವಾಗಿಸಿಬಿಟ್ಟನಲ್ಲ  ರಾಮ ….

              ..'ಹಣ್ಣು' ಮುದುಕಿಯ  ಆಸೆಯನ್ನ …"

ಬಾಯಿ  ಹಾಕಿದೆ  ಮಧ್ಯದಿ …....

              .."ಆಯ್ತಪ್ಪ  ನೀನೂ  'ಹಣ್ಣು' ಮುದುಕನಾಗಿಬಿಡು" …

              ಹೊರಟುಬಿಟ್ಟೆ … ನನಗೂ  ಕೆಲಸವಿತ್ತಲ್ಲ ….

ಇಂದು ….

               ಅದೇ  ಜಾಗದಿ  ಕಂಡೆನವನ …

               ಮಾಯವಾಗಿತ್ತು  ಕುರುಚಲು  ಗಡ್ಡ ….

               ಕಂಡವನ  ಮುಖದಲ್ಲಿ  ಅದೆಂತಹುದೋ  ಕಿರುನಗೆ …

               ತಲೆ  ಕೆರೆದುಕೊಂಡೆ .. ಇವ  'ಶಬರಿ'ಯಾಗಿಬಿಟ್ಟನಾ?!...

                ಆಗ  ಬಂದಪ್ಪಿಕೊಂಡವಳು... 'ಅವಳಲ್ಲ - ಇನ್ನೊಬ್ಬಳು'!!….

               ಅವನ  ಕಿರುನಗೆಯೀಗ  ಸ್ಪಷ್ಟವಾಗಿತ್ತು …

               'ಶಬರಿ'ಯ  ನೆನೆಯುತ್ತ  ನಾನು  ಹೊರಟೆ …..

 

                      ಪಯಣ .....


                             

                        ಅಮಾವಾಸ್ಯೆಯ  ನೀರವತೆಯಲಿ … 

                        ಹುಣ್ಣಿಮೆಯ  ಭೋರ್ಗರೆತದಿ …

                        ಅಲೆಗಳ ಮೇಲೊಂದು  ಪಯಣ ….

                        ದೂರದ  ಧ್ರುವವ  ಸೇರುವ  ಆಸೆಗೆ ..

                        ಅಡ್ಡಿಯಾಗದು  ಹುಣ್ಣಿಮೆ - ಅಮವಾಸ್ಯೆಗಳೆಂಬ  ಭೇದ 

                        ಅಲೆಗಳೊಡನೆ  ಸೆಣಸುತ್ತ , ಕೆಣಕುತ್ತ …

                        ನೀನು  ಶತ್ರು .. ನೀನೆ  ಮಿತ್ರನೆನ್ನುತ ...

                         ಸಾಗಬೇಕು  ಜೀವನ  ಪಯಣ …


                                                                                        --\/эйждт